ಕ್ಯಾಂಬೇ	

ಭಾರತದ ಪಶ್ಚಿಮ ರಾಜ್ಯವಾದ ಗುಜರಾತಿನ ತೀರದ ಒಂದು ಖಾರಿ; ಅದೇ ಹೆಸರಿನ ಒಂದು ಪಟ್ಟಣ. ಕ್ಯಾಂಬೇ ಖಾರಿಯಲ್ಲಿ ಅರಬ್ಬೀಸಮುದ್ರ ಕೊಂಬಿನ ಆಕಾರದಲ್ಲಿ ಭೂಮಿಯೊಳಕ್ಕೆ ಚಾಚಿಕೊಂಡಿದೆ. ನೈಋತ್ಯ ಮಾನ್ಸೂನ್ ಗಾಳಿಯಿಂದಾಗಿ ಈ ಎಡೆಯಲ್ಲಿ ಸಮುದ್ರದ ಭರತ ವಿಪರೀತ. ಸುಮಾರು 40' ಎತ್ತರಕ್ಕೆ ಸಮುದ್ರದ ಉಬ್ಬರ ಸಂಭವಿಸುವುದಲ್ಲದೆ ಅದರ ವೇಗವೂ ಹೆಚ್ಚಾಗಿರುತ್ತದೆ. ಇದರ ಫಲವಾಗಿ ಖಾರಿಯ ತೀರದಲ್ಲಿರುವ ಬಂದರುಗಳನ್ನೆಲ್ಲ ಗೋಡು ಮುಚ್ಚಿಕೊಂಡಿದೆ. ಕಡಲಕರೆಯ ಬದಿ ಅತ್ಯಂತ ಅಪಾಯಕರ.* 

ಕ್ಯಾಂಬೇ ಪಟ್ಟಣ ಅದೇ ಹೆಸರಿನ ಖಾರಿಯ ಮೇಲಿದೆ. ಖಂಬಾತ್ ಅಥವಾ ಖಂಬಾಯತ್ ಎಂದೂ ಹೆಸರಾದ ಈ ಪಟ್ಟಣ ಗುಜರಾತಿನ ಕೈರಾ ಜಿಲ್ಲೆಯ ಕ್ಯಾಂಬೇ ತಾಲ್ಲೂಕಿನ ಕೇಂದ್ರ ಕೂಡ. ಕೈರಾ ರೈಲ್ವೆ ನಿಲ್ದಾಣದ ದಕ್ಷಿಣಕ್ಕೆ 31 ಮೈ. ದೂರದಲ್ಲಿ ಕೋಹಿ ನದಿಯ ಮೇಲಿರುವ ಈ ಪಟ್ಟಣ ಹಿಂದೆ ಇದೇ ಹೆಸರಿನ ಸಂಸ್ಥಾನದ ರಾಜಧಾನಿಯಾಗಿತ್ತು. ಇದು ಭಾರತದ ಮುಖ್ಯ ಬಂದರಾಗಿತ್ತೆಂದು ಮರಿನೋ ಸಸುದೋ, ಮಾರ್ಕೊ ಪೋಲೋ ಮುಂತಾದ ವಿದೇಶಿ ಪ್ರವಾಸಿಗಳು ತಿಳಿಸಿದ್ದಾರೆ. 15ನೆಯ ಶತಮಾನದಲ್ಲಿ ಗುಜರಾತಿನ ಮುಸ್ಲಿಂ ದೊರೆಗಳ ಅಧೀನದಲ್ಲಿ ಇಲ್ಲಿಯ ಬಂದರು ಉಚ್ಛ್ರಾಯಸ್ಥಿತಿಯಲ್ಲಿತ್ತು. ಕ್ಯಾಂಬೇ ಖಾರಿಯಲ್ಲಿ ಸಮುದ್ರದ ಗೋಡು ತುಂಬಿ ಬಂದು ಇದರ ಪ್ರಾಮುಖ್ಯ ಕ್ರಮೇಣ ಕುಗ್ಗಿತು. ಈಗ ಇದು ಒಂದು ವ್ಯಾಪಾರಕೇಂದ್ರ. ಜನಸಂಖ್ಯೆ 51,251 (1961). ಹತ್ತಿ, ಧಾನ್ಯ, ಹೊಗೆಸೊಪ್ಪು ಇವು ಇಲ್ಲಿಯ ವ್ಯಾಪಾರ ಸರಕುಗಳು. ಉಪ್ಪು, ಜಮಖಾನ, ಕೈಮಗ್ಗದ ಬಟ್ಟೆ, ಕಸೂತಿ ಮತ್ತು ಬೆಂಕಿಪೆಟ್ಟಿಗೆ ಕೈಗಾರಿಕೆ; ಅಗೆಟ್, ಕಾರ್ನೀಲಿಯನ್ ಮುಂತಾದ ಕಲ್ಲುಗಳನ್ನಿಟ್ಟು ಒಡವೆಗಳ ತಯಾರಿಕೆ-ಇವಕ್ಕೆ ಕ್ಯಾಂಬೇ ಪ್ರಸಿದ್ಧವಾಗಿದೆ.

	ಖಂಬಾತ್ ಎಂಬ ಹೆಸರು ಕಂಭ ಅಥವಾ ಸ್ತಂಭ ಎಂಬುದರಿಂದ ಬಂತೆಂದು ಹೇಳಲಾಗಿದೆ. ಈ ಪಟ್ಟಣದ ಸುತ್ತ ಇರುವ ಒಂದು ಇಟ್ಟಿಗೆಯ ಕೋಟೆ ಮತ್ತು ಕೋಟೆಯ ಒಳಭಾಗದಲ್ಲಿರುವ ಜಾಮೀ ಮಸೀದಿ ಇಲ್ಲಿಯ ಮುಖ್ಯ ಪ್ರಾಚೀನ ಸ್ಮಾರಕಗಳು. ಜಾಮೀ ಮಸೀದಿಯನ್ನು 1325ರಲ್ಲಿ ಕಟ್ಟಲಾಯಿತು. ಇದು ಗುಜರಾತಿನ ಅತಿಪ್ರಾಚೀನ ಇಸ್ಲಾಮೀ ವಾಸ್ತುಕೃತಿಗಳಲ್ಲೊಂದು. ಇದರಲ್ಲಿ ಹಿಂದೂ ವಾಸ್ತುಶೈಲಿಯ ಅಂಶಗಳೂ ಕಂಡುಬರುತ್ತವೆ. ಈ ಕಟ್ಟಡದಲ್ಲಿ ಮೊದಲಾದ ಈ ಸಮ್ಮಿಶ್ರಶೈಲಿ ಮುಂದೆ ಗುಜರಾತಿನ ಇಸ್ಲಾಮೀ ವಾಸ್ತುಶೈಲಿಗೆ ಮಾದರಿಯಾಯಿತು. ಅಗೆಟ್, ಕಾರ್ನೀಲಿಯನ್ ಮುಂತಾದ ಶಿಲೆಗಳಿಂದ ವಿವಿಧ ರೀತಿಯ ಮಣಿಗಳನ್ನು ತಯಾರಿಸುವ ಕೈಗಾರಿಕೆ ಇಲ್ಲಿ 3ನೆಯ ಸಹಸ್ರಮಾನಕ್ಕೆ ಸೇರಿದ ಹರಪ್ಪ ಸಂಸ್ಕøತಿಯ ಕಾಲದಿಂದಲೂ ಪ್ರಚಲಿತವಾಗಿದೆಯೆಂಬುದು ಉತ್ಖನನಗಳಿಂದ ತಿಳಿದು ಬರುತ್ತದೆ. 									(ಬಿ.ಎನ್.ಸಿ.ಎಚ್.; ಎಸ್.ಎನ್.)

	ತೈಲ ಮತ್ತು ನೈಸರ್ಗಿಕ ಅನಿಲಗಳಿಂದಾಗಿ ಕ್ಯಾಂಬೇ ಈಚೆಗೆ ಪ್ರಸಿದ್ಧವಾಗಿದೆ. ಕ್ಯಾಂಬೇಗೆ 12 ಕಿಮೀ ಪಶ್ಚಿಮದಲ್ಲಿರುವ ಲೂನೆಜ್ ಎಂಬ ಹಳ್ಳಿಯ ಬಳಿ 1958ರಲ್ಲಿ ಪ್ರಥಮವಾಗಿ ಎಣ್ಣೆಯ ಸೆಲೆ ಹೊಡೆಯಲಾಯಿತು. 1968-69ರ ಕೊನೆಯ ವೇಳೆಗೆ ಈ ಪ್ರದೇಶದಲ್ಲಿ ತೋಡಲಾದ ಬಾವಿಗಳ ಸಂಖ್ಯೆ 62. ಕ್ಯಾಂಬೇ ಪ್ರದೇಶದಲ್ಲಿಯ ಅನಿಲೋತ್ಪಾದನ ಸಾಮಥ್ರ್ಯ ದಿನಕ್ಕೆ ಸುಮಾರು 5 ಕೋಟಿ ಘನ ಅಡಿ. ಮುಖ್ಯ ಅನಿಲೋತ್ಪಾದನ ಕ್ಷೇತ್ರವಾದ ಕ್ಯಾಂಬೇಯಲ್ಲಿ ತೈಲೋತ್ಪಾದನೆಯನ್ನೂ ಈಚೆಗೆ ಬೆಳೆಸಲಾಗುತ್ತಿದೆ.      *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ